ನಾಗಪುರ
ಮಹಾರಾಷ್ಟ್ರದ ಒಂದು ವಿಭಾಗ ; ಅದರ ಒಂದು ಜಿಲ್ಲೆ ; ವಿಭಾಗ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ. ಜಿಲ್ಲೆಯ ವಿಸ್ತೀರ್ಣ 9,928 ಚ.ಕಿ.ಮೀ. ಜನಸಂಖ್ಯೆ 19,42688 (1971). ಮಹಾರಾಷ್ಟ್ರದ ಈಶಾನ್ಯ ಗಡಿಯಲ್ಲಿರುವ ಈ ಜಿಲ್ಲೆಯ ಉತ್ತರದಲ್ಲಿ ಮಧ್ಯಪ್ರದೇಶದ ಸಿವನಿ ಮತ್ತು ಛಿಧವಾಡ ಜಿಲ್ಲೆಗಳು, ಪೂರ್ವದಲ್ಲಿ ಮಹಾರಾಷ್ಟ್ರದ ಭಂಡಾರಾ, ದಕ್ಷಿಣ ಹಾಗೂ ನೈಋತ್ಯದಲ್ಲಿ ಚಂದಾಪುರ ಮತ್ತು ವರ್ಧಾ, ಪಶ್ಚಿಮದಲ್ಲಿ ಅಮರಾವತಿ ಜಿಲ್ಲೆಗಳು ಇವೆ. ಮಧ್ಯಪ್ರದೇಶದಲ್ಲಿದ್ದ ಈ ಜಿಲ್ಲೆಯನ್ನು ರಾಜ್ಯ ಪುನರ್ವಿಂಗಡಣೆಯಾದಾಗ (1956) ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು.				
	(ಎಸ್.ಎಂ.ಎ)

ಜಿಲ್ಲೆಯ ಬಹುಭಾಗ ಪ್ರಸ್ಥಭೂಮಿ. ಉತ್ತರದಲ್ಲಿ ಸಾತ್ಪುಡಾ ಬೆಟ್ಟಗಳು ಹಬ್ಬಿವೆ. ಭಾರತದ ಅತ್ಯಧಿಕ ಉಷ್ಣತೆ 46.7º ಛಿ ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 1.164 ಮಿ.ಮೀ. ಜಿಲ್ಲೆಯ ಬಹುಭಾಗ ಕಪ್ಪು ಮಣ್ಣಿನ ಪ್ರದೇಶವಾದ್ದರಿಂದ ಹತ್ತಿ ಬೆಳೆಯಲು ಪ್ರಶಸ್ತವಾಗಿದೆ. ಇದಲ್ಲದೇ ಜೋಳ, ಎಳ್ಳು, ಕಡಲೆ, ಹಣ್ಣುಗಳು ಇಲ್ಲಿಯ ಮುಖ್ಯ ಉತ್ಪನ್ನಗಳು. ಇಲ್ಲಿಯ ಕಿತ್ತಳೆ ಹಣ್ಣುಗಳು ತುಂಬಾ ಪ್ರಸಿದ್ಧ. ಮೆಣಸಿನಕಾಯಿ ಮತ್ತು ವೀಳ್ಯದೆಲೆ ಕೃಷಿಯಲ್ಲೂ ಜಿಲ್ಲೆ ತುಂಬ ಹೆಸರು ಗಳಿಸಿದೆ. ಜಿಲ್ಲೆಯಲ್ಲಿ ಮ್ಯಾಂಗನೀಸ್ ಅದಿರು ಹೇರಳವಾಗಿ ಸಿಗುತ್ತದೆ. ಅನೇಕ ಕಡೆ ಅಮೃತಶಿಲೆಯ ಗಣಿಗಳೂ ಉಂಟು. ಬಟ್ಟೆ ನೇಯ್ಗೆ ಈ ಜಿಲ್ಲೆಯ ಮುಖ್ಯ ಉದ್ಯಮ. ಇಲ್ಲಿ ಹಿತ್ತಾಳೆ ಪಾತ್ರೆಗಳನ್ನು ತಯಾರಿಸುತ್ತಾರೆ. ಜಿಲ್ಲೆಯಿಂದ ಕಿತ್ತಳೆ ಹಣ್ಣು, ಕೈಮಗ್ಗದ ಬಟ್ಟೆ, ಪಾತ್ರೆಗಳು, ಮ್ಯಾಂಗನೀಸ್ ಅದಿರು, ಅಮೃತಶಿಲೆ ಮುಂತಾದವು ಹೊರಗೆ ಹೋಗುತ್ತವೆ. ಉರೇಡ್ (27,092), ಕಾಟೋಲ್ (19236), ರಾಮ್‍ಟೇಕ್ (13440), ನಾರ್‍ಕೇಡ್ (13053) ಇವು ಜಿಲ್ಲೆಯ ಪ್ರಮುಖ ಪಟ್ಟಣಗಳು.

   	ನಾಗಪುರ ನಗರ ಉ.ಅ.21º 90' ಮತ್ತು ಪೂ.ಅ. 79º 90' ಮೇಲೆ ಇದೆ. ಜನಸಂಖ್ಯೆ 8,66,076 (1971). ಇದು ನಾಗ ನದಿಯ ದಂಡೆಯ ಮೇಲಿರುವುದರಿಂದ ಇದಕ್ಕೆ ನಾಗಪುರ ಎಂದು ಹೆಸರಾಯಿತು. 18ನೆಯ ಶತಮಾನದಲ್ಲಿ ಗೋಂಡ್ ವಂಶದ ಭಕ್ತ ಬುಲಂದ್ ಎಂಬ ರಾಜ ಇದನ್ನು ಸ್ಥಾಪಿಸಿದ. ಭೋಂಸಲೇ ವಂಶದ ಮರಾಠಾ ರಾಜರಿಗೆ ಇದು ಆಡಳಿತ ಕೇಂದ್ರವಾಯಿತು. 1817ರಲ್ಲಿ ಬ್ರಿಟಿಷರ ಪ್ರಭಾವಕ್ಕೆ ಒಳಗಾದ ಭೋಂಸಲೆ ಸಂಸ್ಥಾನ 1853ರಲ್ಲಿ ಬ್ರಿಟಿಷರ ಕೈಸೇರಿತು. ನಾಗಪುರ 1861ರಲ್ಲಿ ಮಧ್ಯ ಪ್ರಾಂತ್ಯಗಳ ಆಡಳಿತ ಕೇಂದ್ರವಾಯಿತು. 1867ರಲ್ಲಿ ಭಾರತದಲ್ಲಿ ರೈಲ್ವೆಯ ಪ್ರದೇಶವಾದಾಗ ನಾಗಪುರ ವಾಣಿಜ್ಯ ಕೇಂದ್ರವಾಗಿ ಬೆಳೆಯತೊಡಗಿತು. ಭಾರತದ ಸ್ವಾತಂತ್ರ್ಯಾನಂತರ ಇದು ಮಧ್ಯಪ್ರದೇಶದ ಆಡಳಿತ ಕೇಂದ್ರವಾಯಿತು. ನಾಗಪುರ ಜಿಲ್ಲೆ ಮಹಾರಾಷ್ಟ್ರಕ್ಕೆ ವರ್ಗವಾದ ಮೇಲೆ ಈ ನಗರ ಮಹಾರಾಷ್ಟ್ರದ ಎರಡನೇ ರಾಜಧಾನಿಯಾಯಿತು. ರಾಜ್ಯ ವಿಧಾನಸಭೆಯ ಅಧಿವೇಶನಗಳು ಇಲ್ಲಿಯೂ ನಡೆಯುತ್ತವೆ.
 
ಭೌಗೋಳಿಕವಾಗಿ ನಾಗಪುರ ಭಾರತ ಪರ್ಯಾಯ ದ್ವೀಪದ ಕೇಂದ್ರದಲ್ಲಿದೆ. ಮುಂಬೈ-ಕೊಲ್ಕೊತಾ, ಮದ್ರಾಸ್-ದೆಹಲಿ ರೈಲು ಮಾರ್ಗಗಳು ಇಲ್ಲಿ ಸಂಧಿಸುತ್ತವೆ. ಹಾಗೆಯೇ ಆಂತರಿಕ ವಿಮಾನಗಳಿಗೂ ಇದು ಸಂಧಿಸ್ಥಳ. ಪ್ರಧಾನ ರೈಲು ಮಾರ್ಗ ಮತ್ತು ರಸ್ತೆಗಳು ಇಲ್ಲಿ ಹಾದಿರುವುದರಿಂದಲೂ, ಇದು ಹತ್ತಿ ಬೆಳೆಯುವ ಪ್ರದೇಶವಾದ್ದರಿಂದಲೂ ಇಲ್ಲಿ ಅನೇಕ ಬಟ್ಟೆ ಗಿರಣಿಗಳು ಸ್ಥಾಪಿತವಾಗಿವೆ. ಇದೊಂದು ಕೈಗಾರಿಕಾ ನಗರವಾಗಿ ಬೆಳೆದಿದೆ. ಸಮೀಪದ ಕಾಂಪ್ಟೀ (53,412) ಇಂದು ನಾಗಪುರ ನಗರದ ಕಾರ್ಪೋರೇಷನ್ನಿನ ಎಲ್ಲೆಯೊಳಗೆ ಸೇರಿ ಹೋಗಿದೆ. ಕಾಂಪ್ಟೀ ಒಂದು ಕೈಗಾರಿಕಾ ಕೇಂದ್ರ ಹಾಗೂ ಸೇನಾ ನೆಲೆ.
ಬಟ್ಟೆ ನೇಯ್ಗೆ, ಪಾತ್ರೆ ತಯಾರಿಕೆ ಇಲ್ಲಿನ ಪ್ರಮುಖ ಉದ್ಯಮಗಳು. ನಗರದ ಸುತ್ತ ಮುತ್ತಣ ತೋಟಗಳಲ್ಲಿ ಕಿತ್ತಳೆ ಹಣ್ಣನ್ನು ಬೆಳೆಯುತ್ತಾರೆ. ನಾಗಪುರ ಒಂದು ಪ್ರಮುಖ ವ್ಯಾಪಾರ ಕೇಂದ್ರ. ಇಲ್ಲಿಂದ ಕಿತ್ತಳೆ ಹಣ್ಣು, ಹತ್ತಿ, ಬಟ್ಟೆ, ಮ್ಯಾಂಗನೀಸ್ ಬೇರೆ ಬೇರೆ ಭಾಗಗಳಿಗೆ ಸಾಗುತ್ತವೆ.

ನಗರದ ಮಧ್ಯದಲ್ಲಿ ಸೀತಾಬಲ್ಡಿಯಲ್ಲಿ ಬ್ರಿಟೀಷರ ಕಾಲದ ಕೋಟೆ ಇದೆ. ಪ್ರಮುಖ ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಈ ನಗರ ಬೆಳೆದಿದೆ. ಇಲ್ಲೊಂದು ವಿಶ್ವವಿದ್ಯಾನಿಲಯವಿದೆ. (1923). ಇದಕ್ಕೆ ಸೇರಿದ ಸುಮಾರು 22 ಕಾಲೇಜುಗಳು ನಗರದಲ್ಲಿವೆ.
												*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ